ಕ್ವೀನ್ಸ್‍ಲೆಂಡಿನ ಇತಿಹಾಸ

ವಲಸೆಗಾರರು ಕ್ರಮಬದ್ಧವಾಗಿ ಆಕ್ರಮಿಸಿಕೊಂಡ ಆಸ್ಟ್ರೇಲಿಯನ್ ರಾಜ್ಯಗಳ ಪೈಕಿ ಕ್ವೀನ್ಸ್‍ಲೆಂಡ್ ಕೊನೆಯದು. ಡೂಫಿಹೆನ್ ಎಂಬ ಡಚ್ ಹಡಗು 1606ರಲ್ಲಿ ಕೀರ್‍ವೀರ್ ಭೂಶಿರದವರೆಗೆ ಬಂದಿತ್ತು. ಕಾರ್ಪೆಂಟೇರಿಯ ಖಾರಿಯ ತೀರಪ್ರದೇಶವನ್ನು ಪರಿಶೋಧಿಸಿದವನು ಟ್ಯಾಸ್‍ಮನ್. ಕುಕ್ 1770ರಲ್ಲಿ ಪೂರ್ವ ಕರಾವಳಿಯ ಉದ್ದಕ್ಕೂ ಯಾನ ಮಾಡಿ, ಈಗ ಕುಕ್‍ಟೌನ್ ಎನಿಸಿಕೊಂಡಿರುವ ಸ್ಥಳದಲ್ಲಿ ತನ್ನ ಹಡಗನ್ನು ನಿಲ್ಲಿಸಿದ್ದ. ಆದರೆ ವಾಸ್ತವವಾಗಿ ಕ್ವೀನ್ಸ್‍ಲೆಂಡನ್ನು ಕಂಡುಹಿಡಿದವನು ಆಕ್ಸ್‍ಲಿ. 1823ರಲ್ಲಿ ಆತ ದೇಶಭ್ರಷ್ಟರಾಗಿದ್ದ ಜನರ ಸಹಾಯದಿಂದ ಬ್ರಿಸ್‍ಬೇನ್ ನದಿಯನ್ನು ಪರಿಶೋಧಿಸಿ, ಅದಕ್ಕೆ ನಾಮಕರಣ ಮಾಡಿದ. ಅಪರಾಧಗಳಿಗಾಗಿ ಶಿಕ್ಷೆಗೆ ಒಳಗಾದವರ ವಸತಿಯನ್ನು ಬ್ರಿಸ್‍ಬೇನ್ ನದಿಯ ಮೇಲೆ ಸ್ಥಾಪಿಸಬಹುದೆಂಬ ಆತನ ಸೂಚನೆಯ ಮೇರೆಗೆ ಈ ಎಡೆಗೆ ಕೈದಿಗಳನ್ನು ಮೊಟ್ಟಮೊದಲಿಗೆ ರವಾನಿಸಿದ್ದು 1824ರಲ್ಲಿ. ಡಾರ್ಲಿಂಗ್ ಡೌನ್ಸನ್ನು 1827ರಲ್ಲಿ ಆಲಾನ್ ಕನ್ನಿಂಗ್ ಹ್ಯಾಮ್ ಅನ್ವೇಷಣೆ ಮಾಡಿದ. 1842ರವರೆಗೂ ಕ್ವೀನ್ಸ್‍ಲೆಂಡ್ ಶಿಕ್ಷೆಗೊಳಗಾದ ಅಪರಾಧಿಗಳ ವಾಸದ ನೆಲೆಯಾಗಿತ್ತು. 1842ರ ಅನಂತರ ಯಾರು ಬೇಕಾದರೂ ಅಲ್ಲಿ ಹೋಗಿ ನೆಲಸುವ ಅವಕಾಶ ದೊರಕಿತು. ಮೊತ್ತಮೊದಲಿಗೆ ಕ್ವೀನ್ಸ್‍ಲೆಂಡಿನಲ್ಲಿ ಪಶುಪಾಲನೆಯ ವೃತ್ತಿಯನ್ನು ಪ್ರಾರಂಭಿಸಿದ್ದು 1840ರಲ್ಲಿ. ಮೇರಿ ನದಿಯ ಬಯಲಿನಲ್ಲಿ ಅನೇಕರು ನೆಲಸಿದರು. ಕ್ವೀನ್ಸ್‍ಲೆಂಡಿಗೆ ವಲಸೆಗಾರರನ್ನು ತಂದ ಮೊದಲನೆಯ ಹಡಗು ಆರ್ಟಿಮೀಸಿಯ. ಕ್ವೀನ್ಸ್‍ಲೆಂಡಿನ ಪರಿಶೋಧನೆಯ ಇತಿಹಾಸದಲ್ಲಿ ಪ್ರಸಿದ್ಧವಾದವನು ಲೀಕ್ ಹಾರ್ಟ್. ಈತ ಡಾಸನ್, ಕಾಮೆಟ್, ಮಕೆನ್‍ಜಿó ಮೊದಲಾದ ಅನೇಕ ನದಿಗಳನ್ನು ಪರಿಶೋಧಿಸಿದ. ಇನ್ನೊಬ್ಬ ಮುಖ್ಯ ಪರಿಶೋಧಕ ಥಾಮಸ್ ಮಿಚೆಲ್. ಈತ 1846-47ರಲ್ಲಿ ಮಾರನೋವ ಮತ್ತು ವಾರ್ರೆಗೋ ಜಿಲ್ಲೆಗಳನ್ನು ಸಂದರ್ಶಿಸಿದ. ನೆಲಸುವ ಹಕ್ಕಿಲ್ಲದ ಅನೇಕರು ಇಲ್ಲಿಗೆ ಬಂದು ರಾಕ್‍ಹ್ಯಾಂಪ್ಟ್‍ನಿನ ಸುತ್ತಮುತ್ತ ನೆಲಸಿದರು. 1859ರಲ್ಲಿ ಈ ವಸಾಹತಿನ ಜನರು ನ್ಯೂ ಸೌತ್‍ವೇಲ್ಸ್‍ನಿಂದ ಬೇರ್ಪಡಲು ಚಳವಳಿ ಹೂಡಿ ಅಂತಿಮವಾಗಿ ಜಯ ಗಳಿಸಿ ತಮ್ಮ ವಸಾಹತಿಗೆ ಕ್ವೀನ್ಸ್‍ಲೆಂಡ್ ಎಂದು ಹೆಸರಿಟ್ಟರು. ಅದೇ ವರ್ಷ ಕ್ವೀನ್ಸ್‍ಲೆಂಡಿನಲ್ಲಿ ಪ್ರಜಾಸರ್ಕಾರ ಸ್ಥಾಪಿತವಾಯಿತು.
1860ರ ದಶಕದಲ್ಲಿ ಕ್ವೀನ್ಸ್‍ಲೆಂಡಿನ ಪಶ್ಚಿಮ ಪ್ರದೇಶಗಳಲ್ಲಿ ನೀರಿನ ವಸತಿಯಿದ್ದೆಡೆಗಳಲ್ಲೆಲ್ಲ ಜನರು ನೆಲಸಿದರು. 1869ರ ಪಾರ್ಲಿಮೆಂಟ್ ಕಾಯಿದೆಯಿಂದ ನೆಲಸಿಗರಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಯಿತು. ಮಾರುಕಟ್ಟೆಗಳು ದೂರದಲ್ಲಿದ್ದುದರಿಂದ ಮೊದಮೊದಲು ಪಶುಪಾಲನೆಯಿಂದ ಅನುಕೂಲವಿರಲಿಲ್ಲ. ಸಾರಿಗೆ ಖರ್ಚು ಅಧಿಕವಾಗಿತ್ತು. 1873ರ ಅನಂತರ ವಿಕ್ಟೋರಿಯದಲ್ಲಿ ಚಿನ್ನದ ಗಣಿಗಾರಿಕೆ ಬೆಳೆದಂತೆ ಕ್ವೀನ್ಸ್‍ಲೆಂಡಿನಲ್ಲಿ ಪಶುಪಾಲನೆಯ ವೃತ್ತಿ ಹೆಚ್ಚು ಲಾಭದಾಯಕವಾಗಿ ಪರಿಣಮಿಸಿತು. ಇಪ್ಸ್‍ವಿಚ್‍ನಿಂದ ಡಾಲ್ಬಿಗೂ ವಾರ್‍ವಿಕ್‍ಗೂ ರೈಲ್ವೆ ಸಂಚಾರ ಆರಂಭವಾದ್ದು 1870ರಲ್ಲಿ. ಬ್ರಿಸ್ಬೇನ್‍ನಿಂದ ಕೇನ್ರ್ಸ್ ವರೆಗೆ ರೈಲು ಮಾರ್ಗ ಸಂಪೂರ್ಣಗೊಂಡದ್ದು 1924ರಲ್ಲಿ.
ಜಾನ್ ಡನ್‍ಮೋರ್ ಲ್ಯಾಂಗ್ ಮೊತ್ತಮೊದಲಿಗೆ ರೈತರನ್ನು ಫಾರ್ಟಿಟ್ಯೂಡ್ ಎಂಬ ಹಡಗಿನಲ್ಲಿ 1849ರಲ್ಲಿ ಕರೆದುಕೊಂಡು ಬಂದ. ಇವರು ಮರಗಿಡಗಳನ್ನು ಕತ್ತರಿಸಿ ಭೂಮಿಯನ್ನು ಅಚ್ಚುಕಟ್ಟುಗೊಳಿಸಿ ಕೃಷಿಕಾರ್ಯವನ್ನು ಪ್ರಾರಂಭಿಸಿದರು. ದನಕರುಗಳು ಹೆಚ್ಚಿದುವು. ಗುಡಿಸಿಲುಗಳಿಗೆ ಬದಲಾಗಿ ರೈತರ ದೊಡ್ಡ ಮನೆಗಳು ನಿರ್ಮಿತವಾದುವು. 19ನೆಯ ಶತಮಾನದ ಕೊನೆಯ ಭಾಗದೊಳಗೆ ಸರ್ಕಾರ 10,00,000 ಪೌಂ. ವೆಚ್ಚಮಾಡಿ ಕಾಡುಗಳನ್ನು ಕಡಿಸಿ ಭೂಮಿಯನ್ನು ವ್ಯವಸಾಯಕ್ಕೆ ಸಿದ್ಧಗೊಳಿಸಿತು. ಪಶುಪಾಲನೆಗೆಂದು ಬಿಟ್ಟಿದ್ದ ಭೂಮಿಯ ಬಹುಭಾಗವನ್ನು 20ನೆಯ ಶತಮಾನದ ನಡುಗಾಲದ ವೇಳೆಗೆ ಕೃಷಿಗೆ ಉಪಯೋಗಿಸಿಕೊಂಡು ಕಬ್ಬು ಮತ್ತು ಗೋದಿಯನ್ನು ಬೆಳೆಯಲು ಪ್ರಾರಂಭಿಸಿದರು. ಕ್ವೀನ್ಸ್‍ಲೆಂಡಿನಲ್ಲಿ ಜನಸಂಖ್ಯೆ ಅಧಿಕವಾದಮೇಲೆ ಹೈನಗಾರಿಕೆ ಅಭಿವೃದ್ಧಿ ಹೊಂದಿತು.

ಕ್ವೀನ್ಸ್‍ಲೆಂಡಿನ ಇಪ್ಸ್‍ವಿಚ್‍ನಲ್ಲಿ ಕಲ್ಲಿದ್ದಲು ಪತ್ತೆಯಾದ್ದು 1827ರಲ್ಲಿ. ಆದರೆ ಗಣಿಗಾರಿಕೆ ಆರಂಭವಾದ್ದು 1846ರಲ್ಲಿ. ಕ್ವೀನ್ಸ್‍ಲೆಂಡಿನಲ್ಲಿ ಚಿನ್ನ ಸಿಗುತ್ತದೆ ಎಂದು ತಿಳಿದಮೇಲೆ ಗಣಿಗಳು ಅಭಿವೃದ್ಧಿ ಹೊಂದುವುದಕ್ಕೆ ಅನುಕೂಲವಾಯಿತು. 1858-1873ರಲ್ಲಿ ಕ್ವೀನ್ಸ್‍ಲೆಂಡಿನ ಉತ್ತರ ಮತ್ತು ಪೂರ್ವಭಾಗಗಳಲ್ಲಿ ಅನೇಕ ಗಣಿಗಳು ಆರಂಭವಾದುವು. ತಾಮ್ರ, ಬೆಳ್ಳಿ, ಸತು ಮತ್ತು ಸೀಸ - ಇವು ಕ್ವೀನ್ಸ್‍ಲೆಂಡಿನಲ್ಲಿ ಪತ್ತೆಯಾದ ಇತರ ಖನಿಜಗಳು.

19ನೆಯ ಶತಮಾನದ ಕೊನೆಯಲ್ಲಿ ಕ್ವೀನ್ಸ್‍ಲೆಂಡಿನಲ್ಲಿ ಸಮಾಜವಾದಿ ಚಳವಳಿ ಆರಂಭವಾಯಿತು. ಆಸ್ಟ್ರೇಲಿಯದ ಪ್ರಥಮ ಕಾರ್ಮಿಕ ಸರ್ಕಾರ ಏರ್ಪಟ್ಟಿದ್ದು ಕ್ವೀನ್ಸ್‍ಲೆಂಡಿನಲ್ಲಿ-1899ರಲ್ಲಿ. ಕಾರ್ಮಿಕ ಸಂಘ ಚಳವಳಿಯ ಬೆಂಬಲ ಪಡೆದ ಕಾರ್ಮಿಕ ಪಕ್ಷದ ಸ್ಥಾನ ಕ್ರಮಕ್ರಮವಾಗಿ ಹೆಚ್ಚು ಭದ್ರವಾಯಿತು. ಒಂದನೆಯ ಮಹಾಯುದ್ಧಾನಂತರ ಕಾರ್ಮಿಕ ಪಕ್ಷ ಬಹುಕಾಲ ಅಧಿಕಾರದಲ್ಲಿತ್ತು. 1922ರಲ್ಲಿ ಅದು ಮೇಲ್ಮನೆಯನ್ನು ರದ್ದು ಮಾಡಿತು. ಆದರೆ ಆರಂಭಕಾಲದಲ್ಲಿ ಸರ್ಕಾರದಿಂದ ಆರಂಭವಾದ ಅನೇಕ ಉದ್ಯಮಗಳು ಖಾಸಗಿ ಆಡಳಿತಕ್ಕೆ ವರ್ಗವಾದುವು. ಪಕ್ಷದ ತೀವ್ರ ಸಮಾಜವಾದಿ ಧೋರಣೆ ಕ್ರಮಕ್ರಮವಾಗಿ ಮೃದುವಾಯಿತು. ಕೃಷಿ ಉತ್ಪಾದಕರೇ ನಿರ್ವಹಿಸುವ ಸ್ಥಳೀಯ ಸಹಕಾರಿ ಮಂಡಲಿಗಳನ್ನು ಸಂಘಟಿಸಿದ್ದು ಈ ಸರ್ಕಾರದ ಒಂದು ಮುಖ್ಯ ಸಾಧನೆ.
                               							    (ಎಸ್.ಎಚ್.ಐ.)